ಹಬ್ಬ-ಸಮಾರಂಭಗಳು ಹಾಗೂ ವಿಶೇಷ ಋತುಗಳಲ್ಲಿ ಮಧುಮೇಹದ ನಿಯಂತ್ರಣ

ಭಾರತ ಆರಕ್ಕಿಂತಲೂ ಅಧಿಕ ಧರ್ಮಗಳಿರುವ, 29 ಪ್ರಮುಖ ಧಾರ್ಮಿಕ ಹಬ್ಬಗಳನ್ನು ಆಚರಿಸುವ, 6400 ಜಾತಿಗಳಿರುವ, ಪ್ರತಿ 100 ಕಿಲೋಮೀಟರಿಗೊಂದು ಭಾಷೆಯಿರುವ ದೇಶ. ಸಂಸ್ಕೃತಿ ಮತ್ತು ಆಹಾರಕ್ರಮದಲ್ಲಿ ಅತ್ಯಧಿಕ ಬದಲಾವಣೆ ಇರುವ ವೈವಿಧ್ಯತೆಯ ದೇಶ. ಈ ವೈವಿಧ್ಯತೆಯೇ ಭಾರತೀಯರ ಜೀವನಾಡಿ.
ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಹಲವಾರು ಹಬ್ಬಗಳಾದರೆ ಮಾರ್ಚ್, ಎಪ್ರಿಲ್ ಮತ್ತು ಮೇ ಹೆಚ್ಚಾಗಿ ಎಲ್ಲರೂ ಇಷ್ಟಪಡುವ ಮಾವು ಹಾಗೂ ಹಲಸು ಸುಲಭವಾಗಿ ಸಿಗುವ ಸಮಯವಾಗಿದ್ದು ಅತಿ ಹೆಚ್ಚು ಮದುವೆ, ಗೃಹಪ್ರವೇಶ ಇತ್ಯಾದಿ ಸಮಾರಂಭಗಳು ನಡೆಯುವ ಸಮಯ. ಸಮಾಜ ಜೀವಿಯಾಗಿರುವ ಮನುಷ್ಯನಿಗೆ ಇವೆಲ್ಲವನ್ನೂ ಆನಂದಿಸುವ ಬಯಕೆ ಸಹಜವೇ.
ಭಾರತದಲ್ಲಿರುವ ಹಬ್ಬ, ಹರಿದಿನ, ಧಾರ್ಮಿಕ ಆಚರಣೆಗಳು ಹಾಗೂ ಆಹಾರದ ವೈವಿಧ್ಯತೆಗಳು ಮಧುಮೇಹದೊಂದಿಗೆ ಜೀವಿಸುವರಿಗೆ ಮಧುಮೇಹ ನಿಯಂತ್ರಣಕ್ಕೆ ಅತಿದೊಡ್ಡ ಸವಾಲು ಕೂಡ. ಹಾಗಾಗಿ ವಿಶೇಷ ಸಂದರ್ಭದಲ್ಲಿ ವಿಶೇಷ ಯೋಜನೆ ಮಾಡಿ ಮಧುಮೇಹವನ್ನು ನಿಯಂತ್ರಣದಲ್ಲಿಡುವುದು ಮಧುಮೇಹದೊಂದಿಗೆ ಜೀವಿಸುವವರಿಗೆ ಮತ್ತು ಅವರ ಸಹಜೀವಿಗಳು ತಿಳಿದುಕೊಂಡಿರಲೇಬೇಕಾದ ಕೌಶಲ್ಯ. ಈ ಕೌಶಲ್ಯ ಜೀವನ ಮತ್ತು ಆರೋಗ್ಯದ ಸಮತೋಲನತೆಗೆ ಅತೀ ಅವಶ್ಯ. ಈ ಲೇಖನ ವಿಶೇಷ ಸಂದರ್ಭದಲ್ಲಿ ಮಧುಮೇಹದ ನಿರ್ವಹಣೆಯ ಯೋಜನೆ ರೂಪಿಸಲು ಮುಖ್ಯವಾಗಿರುವ ಕೆಲವೊಂದು ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ.
ಹಬ್ಬದ ಸಂದರ್ಭದಲ್ಲಿ ಮಧುಮೇಹದ ನಿಯಂತ್ರಣ ಸುಗಮವಾಗಿಸಲು ಉಪಾಯಗಳು.
ಭಾರತೀಯರು ಸರಾಸರಿ ತಿಂಗಳಿಗೊಂದು ಮಹತ್ವದ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬಗಳು ಹಬ್ಬದೂಟ ಅಥವಾ ಉಪವಾಸವನ್ನೊಳಗೊಂಡಿರುತ್ತವೆ. ಕೆಲವು ತಲೆಮಾರುಗಳ ಹಿಂದಿನ ನಮ್ಮ ಹಿರಿಯರು ಇಷ್ಟೆಲ್ಲಾ ಹಬ್ಬಗಳನ್ನು ಆಚರಿಸಿದರೂ ಸಹ ಈಗಿನ ಕಾಲದಲ್ಲಿ ನಾವು ತಿನ್ನುವಷ್ಟು ಸಿಹಿತಿಂಡಿಗಳನ್ನು ಹಾಗು ಎಣ್ಣೆಯ ಪದಾರ್ಥಗಳನ್ನು ಸೇವಿಸುತ್ತಿರಲಿಲ್ಲ. ಅಂದು ಹಬ್ಬಗಳ ದಿನಗಳಲ್ಲಿ ಮಾತ್ರ ಋತುವಿಗೆ ತಕ್ಕ ಇಂತಹ ತಿಂಡಿಗಳನ್ನು ಸಮತೋಲನದಲ್ಲಿ ಸೇವಿಸಿದರೆ, ಇಂದು ಸಿಹಿತಿಂಡಿಗಳು ದಿನನಿತ್ಯ ವಿಪರೀತವಾಗಿ ಸೇವಿಸುವ ಆಹಾರವಾಗಿವೆ. ರಸ್ತೆ-ರಸ್ತೆಗಳಲ್ಲಿರುವ ಸಿಹಿತಿಂಡಿ ಮಳಿಗೆಗಳು, ಬೇಕರಿಗಳೇ ಇದಕ್ಕೆ ಕಾರಣ ಹಾಗೂ ಸಾಕ್ಷಿ. ಈಗ ಇವಕ್ಕೆ ಪೈಪೋಟಿಯಾಗಿರುವ “ಫುಡ್ ಡೆಲಿವರಿ” ಸೇವೆಗಳು ಸಹಾ ಬಂದಿವೆ. ಅತಿಯಾದರೆ ಅಮೃತವೂ ವಿಷವೆಂಬುದಕ್ಕೆ ಸಿಹಿ ತಿಂಡಿ ಮತ್ತು ಎಣ್ಣೆ ಪದಾರ್ಥಗಳೇನೂ ಹೊರತಲ್ಲ.
ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಹಬ್ಬದ ದಿನಗಳಲ್ಲಿ ಮತ್ತು ಪ್ರತಿನಿತ್ಯ ಮಧುಮೇಹದ ನಿಯಂತ್ರಣ ದೊಡ್ಡ ಸವಾಲು. ಮಧುಮೇಹದೊಂದಿಗೆ ಜೀವಿಸುವವರಿಗೋಸ್ಕರ ಕುಟುಂಬದವರು ಹಬ್ಬವನ್ನು ಆಚರಿಸದೇ ಇರುವುದೂ ತುಂಬಾ ಕಷ್ಟ. ಆದರೆ ಹಬ್ಬದ ದಿನಗಳಲ್ಲಿ ಹಾಗೆಯೇ ಪ್ರತಿನಿತ್ಯದ ಆಹಾರಕ್ರಮದಲ್ಲಿ ಕಡಿವಾಣ ಹಾಕುವುದೂ ಅವಶ್ಯ ಹಾಗಾಗಿ ಮಧುಮೇಹದೊಂದಿಗೆ ಜೀವಿಸುವವರು ಮತ್ತು ಸಹಜೀವಿಗಳು ಈ ಕೆಳಗಿನ ಕೆಲವೊಂದು ಅಂಶಗಳ ಬಗ್ಗೆ ಹೆಚ್ಚಿನ ಗಮನ ಕೊಡುವುದು ಅಗತ್ಯ.
- ಆರೋಗ್ಯಕರ ಆಹಾರದ ಆಯ್ಕೆ:
- ಮಧುಮೇಹದೊಂದಿಗೆ ಜೀವಿಸುವವರು ಸಿಹಿ ತಿಂಡಿಗಳು ಮತ್ತು ಹೆಚ್ಚು ಕಾರ್ಬೋಹೈಡ್ರೇಟ್ (ಶರ್ಕರಪಿಷ್ಟ) ಇರುವ ಆಹಾರವನ್ನು ಹಬ್ಬದ ಸಂದರ್ಭದಲ್ಲಿ ಸೇವಿಸದೇ ಇರುವುದು ಸೂಕ್ತ. ಕೆಲವೊಮ್ಮೆ ಇವುಗಳಿಂದ ದೂರವಿರುವುದು ಕಷ್ಟವಾಗಬಹುದು ಹಾಗಾಗಿ ಮನೆಯವರು ಮಧುಮೇಹದೊಂದಿಗೆ ಜೀವಿಸುವವರನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಯೋಗ್ಯವಾದ ಆಹಾರದ ಆಯ್ಕೆ ಮಾಡುವುದೇ ಉತ್ತಮ.
- ತರಕಾರಿಗಳ ಸಾಲಡ್, ಹಣ್ಣುಗಳ ಮಿಶ್ರಣ ಅಥವ ಅಚ್ಚ ಹಣ್ಣಿನ ರಸಗಳು (ಸಕ್ಕರೆ ಅಥವಾ ಬೆಲ್ಲವಿಲ್ಲದೆ), ಪಾಯಸ ಅಥವಾ ತಂಪು ಪಾನೀಯಗಳಿಗಿಂತ ಉತ್ತಮ ಆಯ್ಕೆ.
- ಹಾಗೆಯೇ ಬೇಸನ್ ಲಡ್ಡುಗಳಿಗಿಂದ ಒಣ ಹಣ್ಣುಗಳ ಲಡ್ಡು ಸ್ವಲ್ಪ ಉತ್ತಮ ಆಯ್ಕೆ.
- ಮನೆಯಲ್ಲೇ ಕೆನೆರಹಿತ ಹಾಲಿನಿಂದ ತಯಾರಿಸಿದ ಆಹಾರದ ಸೇವನೆ ಅತ್ಯಂತ ಸೂಕ್ತ.
- ತಿಂಡಿಗಳ ಹಾವಳಿ:
- ಎಣ್ಣೆಗಳಲ್ಲಿ ಕರಿದ ತಿಂಡಿಗಳ ಹಾವಳಿ ಹಬ್ಬದ ಸಂದರ್ಭದಲ್ಲಿ ಸಾಮಾನ್ಯ. ಆದರೆ ಮಧುಮೇಹದೊಂದಿಗೆ ಜೀವಿಸುವವರ ಆಯ್ಕೆ ಕರಿದ ತಿಂಡಿಗಳ ಹೊರತಾಗಿ ಒಣಹಣ್ಣುಗಳಾಗಿರಲಿ.
- ನಿಷ್ಟೂರವಾಗಿ ಯಾವುದೇ ದಾಕ್ಷಿಣ್ಯವಿಲ್ಲದೇ ಕರಿದ ತಿಂಡಿಗಳನ್ನು ಬೇಡ ಎನ್ನುವುದನ್ನು ಕರಗತಗೊಳಿಸಿಕೊಳ್ಳಬೇಕು.
- ಆಹಾರದ ಪ್ರಮಾಣ:
- ಆಹಾರದ ಆಯ್ಕೆಯೊಂದೇ ಮಾನದಂಡವಾಗಿರದೆ ನಾವು ಎಷ್ಟು ಆಹಾರ ತಿನ್ನುತ್ತೇವೆ ಎನ್ನುವುದು ಕೂಡ ಪ್ರಮುಖವಾಗಿರುತ್ತದೆ. ಹಾಗಾಗಿ ಆಹಾರವನ್ನು ಹಿತಮಿತವಾಗಿ ಸೇವಿಸುವುದು ಸಹಾ ಹಬ್ಬಗಳ ಸಂದರ್ಭದಲ್ಲಿ ಅತ್ಯಗತ್ಯ.
- ದೈಹಿಕ ಚಟುವಟಿಕೆಗಳು:
- ಹಬ್ಬಗಳ ಸಂದರ್ಭಗಳಲ್ಲಿ ಸರಿಯಾದ ಆಹಾರಕ್ರಮದೊಂದಿಗೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದೂ ಸಹಾ ಅವಶ್ಯ.
- ಔಷಧಗಳು:
- ಮಧುಮೇಹದೊಂದಿಗೆ ಜೀವಿಸುವವರು ಯಾವುದೇ ಕಾರಣಕ್ಕೂ ಔಷಧಗಳನ್ನು ಹಬ್ಬದ ಸಂದರ್ಭದಲ್ಲಿ ನಿಲ್ಲಿಸಕೂಡದು.
- ವೈದ್ಯರ ಸಲಹೆಯ ಮೇರೆಗೆ ಇನ್ಸುಲಿನ್ ತೆಗೆದುಕೊಳ್ಳುವ ಪ್ರಮಾಣವನ್ನು ಕಾರ್ಬೊಹೈಡ್ರೇಟ್ ಆಹಾರ ತೆಗೆದುಕೊಳ್ಳುವ ಪ್ರಮಾಣಕ್ಕನುಗುಣವಾಗಿ ಸರಿಹೊಂದಿಸುವುದು ಅಗತ್ಯವಾಗಬಹುದು.
- ರಕ್ತದಲ್ಲಿನ ಗ್ಲೂಕೋಸ್ ಸ್ವಯಂ-ಪರೀಕ್ಷೆ:
- ಹಬ್ಬದ ಸಂದರ್ಭಗಳಲ್ಲಿ ಆಹಾರಕ್ರಮದಲ್ಲಿ ವ್ಯತ್ಯಯವಾಗಿ ರಕ್ತದಲ್ಲಿ ಗ್ಲುಕೋಸ್ ಅಂಶದ ಏರುಪೇರಾಗುವ ಸಾಧ್ಯತೆಗಳಿದ್ದು ನಿಯಮಿತವಾಗಿ ರಕ್ತದಲ್ಲಿನ ಗ್ಲುಕೋಸ್‍ನ ಸ್ವಯಂ-ಪರೀಕ್ಷೆ ಮಾಡಿಕೊಳ್ಳುವುದು ಅತ್ಯಗತ್ಯ. ಇದರಿಂದ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಅತ್ಯಂತ ಅಧಿಕವಾಗಿ ಅಥವಾ ಕಡಿಮೆಯಾಗಿ ಹೆಚ್ಚಿನ ಅಪಾಯವಾಗುವುದನ್ನು ತಪ್ಪಿಸಲು ಬೇಕಾಗುವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ಸಾಮಾನ್ಯವಾಗಿ ಮಧುಮೇಹದೊಂದಿಗೆ ಜೀವಿಸುವವರು ಹಬ್ಬದ ಸಂದರ್ಭಗಳಲ್ಲಿ ಒಂದೋ ಅಜಾಗರೂಕತೆಯಿಂದ ವೈದ್ಯಕೀಯ ಸಲಹೆಯನ್ನು ನಿರ್ಲಕ್ಷಿಸಿ ತಮ್ಮ ಇಚ್ಚೆಗನುಸಾರ ಎಲ್ಲವನ್ನು ತಿನ್ನುವವರು, ಅಥವಾ ಅತಿಯಾದ ಜಾಗರೂಕತೆಯಿಂದ ಎಲ್ಲವನ್ನೂ ತಿರಸ್ಕರಿಸಿ ಹಬ್ಬವನ್ನು ಆಚರಿಸುವವರು, ಹೀಗೆ ಎರಡು ರೀತಿಯ ನಡವಳಿಕೆಯನ್ನು ತೋರ್ಪಡಿಸುವವರಿರುತ್ತಾರೆ. ಆದರೆ ಇವೆರಡರ ನಡುವೆ ಸಮತೋಲನದ ನಡವಳಿಕೆಯಿಂದ ಪ್ರತಿ ಹಬ್ಬವನ್ನು ಆನಂದಿಸುವಂತಿರಬೇಕು.
ಉಪವಾಸದ ಸಂದರ್ಭದಲ್ಲಿ ಮಧುಮೇಹದ ನಿಯಂತ್ರಣ ಸುಗಮವಾಗಿಸಲು ಯೋಜನೆಗಳು.
ನವರಾತ್ರಿ, ರಂಜಾನ್, ಈಸ್ಟರ್ ಹಬ್ಬದ ಮೊದಲ ಕಪ್ಪು ದಿನಗಳು ಸಾಮಾನ್ಯವಾಗಿ ವಿವಿಧ ಧರ್ಮೀಯರಿಗೆ ದೀರ್ಘಕಾಲದ ಉಪವಾಸದ ದಿನಗಳು. ಮಧುಮೇಹದೊಂದಿಗೆ ಜೀವಿಸುವವರು ಉಪವಾಸವನ್ನು ಮಾಡುವ ಮೊದಲು ವೈದ್ಯರು ಮತ್ತು ಪಥ್ಯಾಹಾರ ತಜ್ಞರೊಂದಿಗೆ ಆಪ್ತಸಮಾಲೋಚನೆ ಮಾಡಿ ಉಪವಾಸ ವ್ರತವನ್ನು ಕೈಗೊಳ್ಳುವುದು ಹೆಚ್ಚು ಸೂಕ್ತ. ಈ ಉಪವಾಸ ಪೂರ್ವ ಆರೋಗ್ಯ ತಪಾಸಣೆಯಿಂದ ಉಪವಾಸದ ಸಂದರ್ಭದಲ್ಲಿ ಮಧುಮೇಹದೊಂದಿಗೆ ಜೀವಿಸುವವರು ಆಹಾರಕ್ರಮದಲ್ಲಿ ಮಾಡಬೇಕಾದ ಬದಲಾವಣೆ ಮತ್ತು ಔಷಧದಲ್ಲಿನ ಮಾರ್ಪಾಡಿನ ಅವಶ್ಯಕತೆಯನ್ನು ತಿಳಿದು ಸರಿಯಾಗಿ ಪಾಲಿಸಲು ಸಹಕಾರಿಯಾಗಿರುತ್ತದೆ. ಇದು ರಕ್ತದಲ್ಲಿ ಗ್ಲುಕೋಸ್ ಅಂಶ ಅತಿಯಾಗಿ ಅಥವಾ ಕಡಿಮೆಯಾಗಿ ಅನಾಹುತವಾಗುವುದನ್ನು ತಪ್ಪಿಸಿ ನಿಯಂತ್ರಣದಲ್ಲಿರಿಸಲು ಕೂಡಾ ಸಹಕಾರಿಯಾಗುತ್ತದೆ.
ಉಪವಾಸವು ಕೂಡ ಜೀವನಶೈಲಿಯ ಮಾರ್ಪಾಡಿನ ಭಾಗ. ಇದನ್ನು ಸರಿಯಾಗಿ ಮಾಡುವುದರಿಂದ ಹಲವಾರು ಲಾಭಗಳನ್ನು ಹೊಂದಬಹುದು. ಉಪವಾಸ ಶುರುಮಾಡುವ ಮೊದಲು ನಿಧಾನವಾಗಿ ಕ್ಯಾಲರಿ ಬಿಡುಗಡೆ ಆಗುವ ಆಹಾರದ ಸೇವನೆ (ಅತಿಯಾಗಿ ಪಕ್ವವಾಗಿಲ್ಲದ ಹಣ್ಣುಗಳು, ಹಸಿರು ತರಕಾರಿಗಳು, ಧಾನ್ಯಗಳು) ಮತ್ತು ಸಾಕಷ್ಟು ನೀರಿನ (ವಿಶೇಷವಾಗಿ ಉಪವಾಸದ ಸಮಯದಲ್ಲಿ ನೀರು ನಿಷಿದ್ಧವಾಗಿದ್ದಲ್ಲಿ) ಸೇವನೆ ಅಗತ್ಯ. ಉಪವಾಸದ ಸಂದರ್ಭದಲ್ಲಿ ಯಾವುದೇ ಶ್ರಮದಾಯಕ ಕೆಲಸ ಅಥವಾ ವ್ಯಾಯಾಮ ಸಂಪೂರ್ಣ ನಿಷಿದ್ಧ. ಧಾರ್ಮಿಕ ಉಪವಾಸದ ಸಂಧರ್ಭದಲ್ಲಿ ಧ್ಯಾನ ಮತ್ತು ಪ್ರಾರ್ಥನೆಯಿಂದ ಒತ್ತಡ ನಿರ್ವಹಣೆ ಮಾಡಲು ಸಹಾ ಅನುಕೂಲವಾಗುತ್ತದೆ.
ಏಕಾದಶಿ, ಸಂಕಷ್ಟಹರಣ ಚೌತಿ, ಪ್ರದೋಶ ಷಷ್ಟಿ ಇತ್ಯಾದಿ ತಿಂಗಳಿಗೊಮ್ಮೆ ಅಥವಾ ತಿಂಗಳಿಗೆರಡು ಬಾರಿ ಮಾಡುವ ಉಪವಾಸದ ಸಂದರ್ಭದಲ್ಲಿ ಔಷಧ ತೆಗೆದುಕೊಳ್ಳುವ ಬಗ್ಗೆ ವೈದ್ಯರಲ್ಲಿ ಚರ್ಚಿಸಿ ಸೂಕ್ತ ಮಾರ್ಗದರ್ಶನ ತೆಗೆದುಕೊಳ್ಳಬೇಕು. ಎಲ್ಲಾ ಉಪವಾಸಗಳ ಸಂದರ್ಭದಲ್ಲಿ ರಕ್ತದಲ್ಲಿ ಸಕ್ಕರೆಯ ಅಂಶವನ್ನು ತಿಳಿಯಲು ಸ್ವಯಂ-ಪರೀಕ್ಷೆ ಮಾಡಿಕೊಳ್ಳಬೇಕು, ಹಾಗೂ ಆರೋಗ್ಯದಲ್ಲಿ ಏರುಪೇರಾದಲ್ಲಿ ಉಪವಾಸವನ್ನು ನಿಲ್ಲಿಸುವ ನಮ್ಯತೆಯನ್ನು ಹೊಂದಿರಬೇಕು.
ವಿಶೇಷ ಋತುವಿನಲ್ಲಿ ಸಮಾರಂಭಗಳು ಮತ್ತು ಸ್ಥಳೀಯವಾಗಿ ಎಲ್ಲರಿಗೂ ಇಷ್ಟವಾಗುವ ಹಣ್ಣುಗಳು ಲಭ್ಯವಿರುವಾಗ ಮಧುಮೇಹದ ನಿಯಂತ್ರಣದ ಸವಾಲನ್ನು ಎದುರಿವುದು ಹೇಗೆ?
ಮೊದಲೇ ತಿಳಿಸಿದಂತೆ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಸರದಿ ಸಾಲಿನ ಹಬ್ಬಗಳಾದರೆ ಮಾರ್ಚ್, ಎಪ್ರಿಲ್, ಮೇ ತಿಂಗಳುಗಳಲ್ಲಿ ಸರದಿ ಸಾಲಿನ ಸಾಮಾಜಿಕ ಮತ್ತು ಧಾರ್ಮಿಕ ಸಮಾರಂಭಗಳು ಹಾಗೂ ಅತಿ ಹೆಚ್ಚಾಗಿ ಎಲ್ಲರೂ ಇಷ್ಟಪಡುವ ಹಣ್ಣುಗಳು ಲಭ್ಯ ಇರುವ ಸಮಯವಾದ್ದರಿಂದ ಮಧುಮೇಹದೊಂದಿಗೆ ಜೀವಿಸುವವರಿಗೆ ಮಧುಮೇಹದ ನಿಯಂತ್ರಣ ದೊಡ್ಢ ಸವಾಲು.
ಇದರ ಜೊತೆಗೆ ಮಧುಮೇಹದೊಂದಿಗೆ ಜೀವಿಸುವವರಿಗೆ ಸಮಾರಂಭಗಳಲ್ಲಿ ಎಲ್ಲರ ಜೊತೆಗೆ ಕುಳಿತು ವಿಶೇಷ ಊಟವನ್ನು ಮಾಡುವ ಒತ್ತಡ, ಹಾಗೆಯೇ ಧಾರ್ಮಿಕ ಆಚರಣೆಯ ಭಾಗವಾಗಿ ಮಠ ಮಂದಿರ ಇತ್ಯಾದಿಗಳಲ್ಲಿ ಸಿಹಿ ಊಟ ಮಾಡಬೇಕಾದ ಸಂದಿಗ್ಧತೆ. ಊರಿನ ಮಾರಿ, ನಾಗಮಂಡಲ, ಢಕ್ಕೆ ಬಲಿ, ಭೂತ, ಕೋಲ, ಯಕ್ಷಗಾನ, ನಾಟಕ ಇತ್ಯಾದಿಗಳಿಂದ ನಿದ್ರೆಯಲ್ಲಿ ಮತ್ತು ಆಹಾರದ ಸಮಯದಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಮಧುಮೇಹದ ನಿಯಂತ್ರಣಕ್ಕೆ ಕೆಲವು ಮಾರ್ಗಸೂಚಿಗಳು:
- ಸಾಮಾಜಿಕ ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಬಫೆ (ಸ್ವಯಂ-ಬಡಿಸಿಕೊಳ್ಳುವ) ಊಟ ಇದ್ದಲ್ಲಿ ಬೇಕಿದ್ದಷ್ಟು ಮತ್ತು ಯೋಗ್ಯವಾದ ಆಹಾರದ ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಮತ್ತು ಇದಿಲ್ಲದೆ ಪಂಕ್ತಿಯಲ್ಲಿ ಕುಳಿತು ಊಟ ಮಾಡುವ ವ್ಯವಸ್ಥೆ ಇದ್ದಾಗ ತಮಗೆ ಸೂಕ್ತವಾಗುವ ಆಹಾರವನ್ನು ಮಾತ್ರ ಬಡಿಸುವಂತೆ ಹೇಳುವುದು ಉತ್ತಮ.
- ಆದಷ್ಟು ಕಡಿಮೆ ಸಿಹಿ ಅಂಶವಿರುವ ಆಹಾರದ ಸೇವನೆಯನ್ನು ಮಾಡುವುದು ಉತ್ತಮ. ಮಧುಮೇಹ ಇರುವವರಿಗೆ ಸಕ್ಕರೆ ಹಾಗೂ ಬೆಲ್ಲದ ಪರಿಣಾಮ ಒಂದೇ, ಇದನ್ನು ದಯವಿಟ್ಟು ನೆನಪಿನಲ್ಲಿಡಿ.
- ನಿರ್ದಾಕ್ಷಿಣ್ಯವಾಗಿ ಮಧುಮೇಹದ ನಿಯಂತ್ರಣಕ್ಕೆ ಅಡ್ಡಿಯಾಗುವ ಆಹಾರವನ್ನು ಯಾವುದೇ ಮುಜುಗರ ಅಥವಾ ಸಂಕೋಚ ಪಡದೇ “ಬೇಡ” ಎನ್ನುವ ಕ್ರಮ ರೂಢಿಸಿಕೊಳ್ಳುವುದು ಒಳ್ಳೆಯದು.
- ಸಮಾರಂಭದ ಆಯೋಜನೆ ಮಾಡಿದವರು ಒತ್ತಾಯು ಪೂರ್ವಕವಾಗಿ ಸಿಹಿ ಇತ್ಯಾದಿಗಳನ್ನು ಅತಿಥಿಗಳಿಗೆ ಬಡಿಸುವ ಪದ್ದತಿಯನ್ನು ನಿಲ್ಲಿಸುವುದು ಸೂಕ್ತ.
- ದೇವಸ್ಥಾನ ಮಂದಿರ ಇತ್ಯಾದಿಗಳಲ್ಲಿ ಕೊಡಲ್ಪಡುವ ಸಿಹಿ ಪ್ರಸಾದವನ್ನು ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಸ್ವೀಕರಿಸುವುದು ಒಳ್ಳೆಯದು.
- ಹಲಸಿನ ಹಣ್ಣು, ಮಾವಿನ ಹಣ್ಣು ಇತ್ಯಾದಿ ಸಿಹಿಯಾದ ಹಣ್ಣುಗಳನ್ನು ಮಧುಮೇಹ ನಿಯಂತ್ರಣದಲ್ಲಿದ್ದಾಗ ಮಾತ್ರ ನಿಗದಿತ ಪ್ರಮಾಣದಲ್ಲಿ ತಿನ್ನುವುದು ಸೂಕ್ತ ಹಾಗೂ ಈ ಹಣ್ಣುಗಳನ್ನು ತಿಂದಷ್ಟೂ ಇನ್ನೂ ತಿನ್ನಬೇಕನ್ನುವ ಬಯಕೆ ಆಗುವುದರಿಂದ ಆದಷ್ಟು ತಿನ್ನದೇ ಇರುವುದೇ ಉತ್ತಮ ಮಾರ್ಗ.
- ಮಳೆಗಾಲದಲ್ಲಿ ಹೆಚ್ಚಾಗಿ ಸೇವನೆ ಮಾಡುವ ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆಯನ್ನು ಆದಷ್ಟು ಕಡಿಮೆಗೊಳಿಸಬೇಕು.
- ರಾತ್ರಿಯೆಲ್ಲ ನಡೆಯುವ ಸಮಾರಂಭಗಳಿದ್ದಲ್ಲಿ ನಿದ್ರೆ, ಆಹಾರದ ಸಮಯ, ಆಯ್ಕೆ ಮತ್ತು ಪ್ರಮಾಣದ ಬಗ್ಗೆ ಸಮಂಜಸವಾದ ಮತ್ತು ಕಾರ್ಯರೂಪಕ್ಕೆ ತರಬಹುದಾದ ಯೋಜನೆಯನ್ನು ಮಾಡಿ ಅಭ್ಯಾಸದಲ್ಲಿ ರೂಢಿಸಿಕೊಳ್ಳುವುದು ಸೂಕ್ತ.

ಪ್ರತಿಯೊಬ್ಬ ಮಧುಮೇಹದೊಂದಿಗೆ ಜೀವಿಸುವವರು ಭಾರತದ ಭೌಗೋಳಿಕ ಮತ್ತು ಸಾಂಸ್ಕೃತಿಕ ವಿಭಿನ್ನತೆಯಂತೆ ವಿಭಿನ್ನರಾಗಿರುವಿದರಿಂದ ವೈದ್ಯರು, ಪಥ್ಯಾಹಾರತಜ್ಞರು, ಶುಶ್ರೂಷಕ ಶುಶ್ರೂಷಕಿಯರು ಮತ್ತು ವ್ಯಾಯಾಮತಜ್ಞರೊಂದಿಗೆ ಚರ್ಚಿಸಿ ಸೂಕ್ತ ಯೋಜನೆ ಮಾಡಿ ಮಧುಮೇಹದ ನಿಯಂತ್ರಣಕ್ಕೆ ಬೇಕಾದ ಮಾರ್ಗೋಪಾಯ ಮಾಡಿಕೊಳ್ಳುವುದರಿಂದ ಸಾಮಾಜಿಕ ಸಂತೋಷ ಮತ್ತು ಧಾರ್ಮಿಕ ನಂಬಿಕೆಗಳ ಆಚರಣೆಯೊಂದಿಗೆ ಮಧುಮೇಹದ ನಿರ್ವಹಣೆಯನ್ನೂ ಮಾಡಿಕೊಂಡು ಉತ್ತಮ ಆರೋಗ್ಯ ಹೊಂದಲು ಸಾಧ್ಯ.
ವಿ.ಸೂ.: ಈ ಲೇಖನದ ಮೂಲ ಆವೃತ್ತಿ ಉದಯವಾಣಿ ದಿನಪತ್ರಿಕೆಯ ಡಿಸೆಂಬರ್ 22, 2019 ರ ಆರೋಗ್ಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತವಾಗಿದೆ.

Dr Shashikiran Umakanth (MBBS, MD, FRCP Edin.) is Professor & Head of Internal Medicine at MMMC, Manipal Academy of Higher Education, and has clinical responsibilities at the Department of Medicine, Dr TMA Pai Hospital, Udupi, Karnataka, India.