ಬದಲಾವಣೆ ಮುಂದಿದೆ – ನಾವು ಸಿದ್ಧರಾಗಿದ್ದೇವೆಯೇ?

Change ahead

ಇಡೀ ಜಗತ್ತು 2009-10ರಲ್ಲಿ H1N1 ಇನ್ಫ್ಲೂಯೆನ್ಸಾ (ಶೀತಜ್ವರ) ಸಾಂಕ್ರಾಮಿಕ ರೋಗಕ್ಕೆ ತುತ್ತಾದಾಗ, ಭಾರತ ಸಹಾ ಅದರಿಂದ ಗಮನಾರ್ಹವಾಗಿ ನರಳಿತ್ತು. ಈಗ ನಾವು ಕೋವಿಡ್-19 ಎನ್ನುವ ಮತ್ತೊಂದು ಸಾಂಕ್ರಾಮಿಕ ರೋಗದ ನಡುವಿಲ್ಲಿರುವಾಗ, ಮುಂದಿನ್ನೂ ಬರಬಹುದಾದಂತಹ ಸಾಂಕ್ರಾಮಿಕ ರೋಗಗಳನ್ನು ಹಿಡಿತದಲ್ಲಿ ಇಡಲು 2009-10ರ ಅನುಭವದಿಂದ ನಾವು ಕಲಿಯಬಹುದಾದ ಪಾಠ ಏನಾದರೂ ಇದೆಯೇ?

ವಿಶ್ವದಾದ್ಯಂತ, 2009-10ರ ಸಾಂಕ್ರಾಮಿಕದ ಸಮಯದಲ್ಲಿ ಸುಮಾರು 5 ಲಕ್ಷಕ್ಕಿಂತಲೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿರಬಹುದು ಎಂದು ಅಮೆರಿಕಾ ದೇಶದ CDC (ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕೇಂದ್ರ) ಅಂದಾಜಿಸಿತ್ತು. ಭಾರತದ ಸಾರ್ವಜನಿಕ ವಲಯದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ 2009-10ರಲ್ಲಿ H1N1 ಇನ್ಫ್ಲೂಯೆನ್ಸಾದಿಂದ 44,987 ಧೃಢ ಪ್ರಕರಣಗಳು ಮತ್ತು 2,728 ಸಾವುಗಳಾಗಿದ್ದವು. ಜ್ವರ ಮತ್ತು ಕೆಮ್ಮು ಇರುವ ಪ್ರತಿಯೊಬ್ಬ ರೋಗಿಯೂ ಭಾರತದಲ್ಲಿ H1N1 ಪರೀಕ್ಷೆಗೆ ಒಳಗಾಗಲಿಲ್ಲ, ಆದ್ದರಿಂದ ನಿಸ್ಸಂದೇಹವಾಗಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೋಗ ಹಾಗೂ ಮರಣಗಳು ಈ H1N1 ನಿಂದ ಆಗಿರಲೇಬೇಕು. ಸೀಮಿತ ಆರೋಗ್ಯ ಸಂಪನ್ಮೂಲಗಳು, ಅನುಮೋದಿತ ವೈರಾಲಜಿ ಲ್ಯಾಬೋರೇಟರಿಗಳ ಕೊರತೆ, ಇನ್ಫ್ಲೂಯೆನ್ಸಾ ತರಹದ ಅನಾರೋಗ್ಯ (ILI) ಇದ್ದವರಿಗೂ ಅದರ ವರದಿಯಾಗಿಲ್ಲದಿರುವ ಸಾಧ್ಯತೆ, ಇಂತಹ ಕಾರಣಗಳಿಂದ ಹಲವಾರು H1N1 ರೋಗಿಗಳು ಮತ್ತು ಸಾವುಗಳನ್ನು ಇನ್ಫ್ಲೂಯೆನ್ಸಾ ಎಂದು ಡಯಾಗ್ನೋಸ್ಟಿಕ್ ಪರೀಕ್ಷೆಗಳಿಂದ ಗುರುತಿಸಲೇ ಆಗಲಿಲ್ಲ. 2009ರಲ್ಲಿ ಭಾರತ ಜಗನ್ಮಾರಿ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸಿದ್ಧವಾಗಿರಲಿಲ್ಲ. ಆರೋಗ್ಯ ವ್ಯವಸ್ಥೆಗಳು ಮತ್ತು ಆಸ್ಪತ್ರೆಗಳು ಈ ಸಾಂಕ್ರಾಮಿಕವನ್ನು ತಮ್ಮ ತಮ್ಮ ಸಾಮರ್ಥ್ಯದಿಂದ ತಾವೇ, ಸರ್ಕಾರಿ ಸಂಸ್ಥೆಗಳು ಮತ್ತು ಸಚಿವಾಲಯಗಳ ಕನಿಷ್ಠ ಬೆಂಬಲದೊಂದಿಗೆ, ನಿರ್ವಹಿಸಬೇಕಾಗಿತ್ತು.

2010 ನಂತರ ಏನಾಯಿತು? H1N1 ಇನ್ಫ್ಲೂಯೆನ್ಸಾ ಭಾರತವನ್ನು ಬಿಟ್ಟು ಹೋಯ್ತೆ?

ಇಲ್ಲ. ಅದು ಬಿಟ್ಟು ಹೋಗಲಿಲ್ಲ. ಭಾರತದ ರಾಷ್ಟ್ರೀಯ ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕೇಂದ್ರದ (NCDC) ಪ್ರಕಾರ, 2019 ರಲ್ಲಿ ಭಾರತದಲ್ಲಿ 28,798 H1N1 ಇನ್ಫ್ಲೂಯೆನ್ಸಾ ಪ್ರಕರಣಗಳು ಮತ್ತು 1,218 ಸಾವುಗಳು ಕಂಡುಬಂದಿವೆ. ಅದೇ ರೀತಿ, 2018 ರಲ್ಲಿ 15,266 ಪ್ರಕರಣಗಳು ಮತ್ತು 1,128 ಸಾವುಗಳು ಕಂಡುಬಂದಿದ್ದು, 2017 ರಲ್ಲಿ 38,811 ಪ್ರಕರಣಗಳು ಮತ್ತು 2,270 ಸಾವುಗಳು ದೃಢಪಟ್ಟಿವೆ.

ನಾವು ಗಮನಿಸಬೇಕಾದ ಕುತೂಹಲಕಾರಿ ಸಂಗತಿಯೆಂದರೆ, ಲಸಿಕೆ ಹಾಗೂ ಉಪಯುಕ್ತವಾದ ಆಂಟಿವೈರಲ್ ಔಷಧಿ (ಒಸೆಲ್ಟಾಮಿವಿರ್) ಲಭ್ಯವಿದ್ದರೂ ಸಹ ಈ H1N1 ಇನ್ಫ್ಲೂಯೆನ್ಸಾ ಕಾಯಿಲೆಯಿಂದ ಇಷ್ಟು ರೋಗ ಮತ್ತು ಸಾವುಗಳು ಸಂಭವಿಸಿವೆ.

ತರುವಾಯ, H1N1 ಇನ್ಫ್ಲೂಯೆನ್ಸಾ ಭಾರತಕ್ಕೆ “ಸ್ಥಳೀಯ” ಆಗಿಬಿಟ್ಟಿದೆ. ಸ್ಥಳೀಯ ಸೋಂಕು ಎಂದರೆ ಮತ್ತೊಂದು ಪ್ರದೇಶದಿಂದ ಆಮದು ಮಾಡಿಕೊಳ್ಳದೆ ಒಂದು ಪ್ರದೇಶದಲ್ಲಿ ಕಾಯಿಲೆಗೆ ಆಗಾಗ್ಗೆ ಕಾರಣವಾಗಿರುವಂತಹ ಸೋಂಕು.

ಹೀಗಿದ್ದರೂ ಸಹಾ ಮಾಧ್ಯಮಗಳಲ್ಲಿ ಇದರ ವರದಿಯನ್ನು ನಾವು ಏಕೆ ನೋಡುತ್ತಿಲ್ಲ?

ಹೆಚ್ಚಿನ ಮಾಧ್ಯಮಗಳು ಪ್ರಸ್ತುತ ಮತ್ತು ಸಂವೇದನಾಶೀಲ ಸಂಗತಿಗಳನ್ನು ಮಾತ್ರ ಎತ್ತಿ ತೋರಿಸುತ್ತವೆ. ಮಾಧ್ಯಮಗಳು ಜನರ ಆಸಕ್ತಿಯನ್ನು ಅಳೆದು ಅಂತಹ ವಿಷಯಗಳ ಮೇಲೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತವೆ. ಜನರ ಗಮನ ಎಷ್ಟು ಸಮಯದವರೆಗೆ ಒಂದೇ ಸಮಸ್ಯೆಯ ಮೇಲೆ ಇರಬಹುದು? ಸಾರ್ವಜನಿಕರ ನೆನಪು ಕ್ಷಣಿಕ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅಷ್ಟೇ ಅಲ್ಲ, ಸಾರ್ವಜನಿಕರ ಮತ್ತು ಮಾಧ್ಯಮಗಳ ಗಮನವೂ ಸಹಾ ತಾತ್ಕಾಲಿಕ ಎಂದು ನಾವು ಹೇಳಬಹುದು.

ಆದ್ದರಿಂದ, ಅಷ್ಟೊಂದು ಮರಣಗಳಾದರೂ ಸಹಾ H1N1 ಇನ್ಫ್ಲೂಯೆನ್ಸಾ ಬಗ್ಗೆ ವರದಿಗಳಿಗೆ ಪ್ರಾಮುಖ್ಯತೆ ಸಿಕ್ಕಿಲ್ಲ. ಬಹುಶಃ ನಮ್ಮ ಪತ್ರಿಕೆಗಳ 9 ನೇ ಅಥವಾ 13 ನೇ ಪುಟಗಳಲ್ಲಿ ಬಂದಿರಬಹುದು. ಟಿವಿ ಸುದ್ದಿಗಳಲ್ಲಿಯೂ ಈ ರೋಗಕ್ಕೆ ಹೆಚ್ಚು ಸಮಯವನ್ನು ನೀಡಲಿಲ್ಲ. ಮಾಧ್ಯಮಗಳ ಈ ನಿರಾಸಕ್ತಿಯಿಂದ ಸರ್ಕಾರದ ನಿರಾಸಕ್ತಿ ಮತ್ತು ಕಾಲಕ್ರಮೇಣ ರೋಗದ ಉಲ್ಬಣ ಸಹಾ ಆಗಬಹುದು.

ಹಾಗಾದರೆ ಕೋವಿಡ್-19 ವಿಷಯದಲ್ಲಿ ಏನಾಗಬಹುದು?

ಕೋವಿಡ್-19 ಇನ್ನೂ ಭಾರೀ ಜಗನ್ಮಾರಿ ಸಾಂಕ್ರಾಮಿಕ. ಇದು ಹೇಗೆ ಹಾಗೂ ಎಲ್ಲಿಂದ ಶುರುವಾಯಿತು ಎನ್ನುವ ಬಗ್ಗೆ ಹಲವಾರು ಸಿದ್ಧಾಂತಗಳು ಹಾಗೂ ಪಿತೂರಿಯ ಕತೆಗಳನ್ನು ಹೊಂದಿರುವ ಹೊಸ ವೈರಸ್. ಈ ಹೊಸ ಕೊರೋನಾವೈರಸ್ ಇನ್ಫ್ಲೂಯೆನ್ಸಾಕ್ಕಿಂತ ಹೆಚ್ಚು ವೇಗವಾಗಿ ಮತ್ತು ಸುಲಭವಾಗಿ ಹರಡುವಂತಹದ್ದು. ಅದೂ ಸಾಲದ್ದಕ್ಕೆ, ನಮ್ಮಲ್ಲಿ ಈ ಹೊಸಾ ಕೊರೋನಾವೈರಸ್ಸಿಗೆ ಇನ್ನೂ ಲಸಿಕೆ ಅಥವಾ ಪರಿಣಾಮಕಾರಿ ಔಷಧಿ ಸಹಾ ಇಲ್ಲ.

ಇದನ್ನು ಬರೆಯುವ ಸಮಯದಲ್ಲಿ, ಸಿಕ್ಕಿಂ ಹೊರತುಪಡಿಸಿ ಭಾರತದ ಎಲ್ಲಾ ರಾಜ್ಯಗಳು ಕೋವಿಡ್-19 ಪ್ರಕರಣಗಳನ್ನು ವರದಿ ಮಾಡಿವೆ; ಸುಮಾರು14,500 ಪ್ರಕರಣಗಳಿದ್ದು, 500 ಸಾವುಗಳಿಗೆ ಕೋವಿಡ್-19 ಕಾರಣವಾಗಿದೆ. ಕೋವಿಡ್-19 ನ ಡಯಾಗ್ನೋಸ್ಟಿಕ್ ಪರೀಕ್ಷಾ ಕಾರ್ಯತಂತ್ರವು ಇನ್ನೂ ವಿಕಸನಗೊಳ್ಳುತ್ತಿರುವುದರಿಂದ, ಹೆಚ್ಚು ಹೆಚ್ಚು ಪ್ರಯೋಗಾಲಯಗಳನ್ನು ನಿಯೋಜಿಸಲಾಗುತ್ತಿರುವುದರಿಂದ, ಈಗ ನಾವು ನೋಡುತ್ತಿರುವ ಸಂಖ್ಯೆಗಳು ಮುಳುಗಿದ ಮಂಜುಗಡ್ಡೆಯ ಮೆಲ್ತುದಿಯಂತೆ. ಪರೀಕ್ಷೆ ಮುಂದುವರಿದ ಹಾಗೆ ಹೆಚ್ಚು ರೋಗಿಗಳು ಕಾಣಿಸಿಕೊಳ್ಳಬಹುದು.

ಆದರೆ ಕೋವಿಡ್-19 ಹೊಸ ಭಾರತವನ್ನು ಎದುರಿಸುತ್ತಿದೆ. ಹಾಗಾಗಿ ಸ್ವಲ್ಪ ಭರವಸೆಯೂ ಇದೆ.

ಈ 2020 ರ ಸಮಯದಲ್ಲಿ, ಸಾಂಕ್ರಾಮಿಕ ರೋಗಗಳನ್ನು ನಿಭಾಯಿಸುವ ಭಾರತದ ಸಾಮರ್ಥ್ಯ ಮೊದಲಿಗಿಂತ ಉತ್ತಮವಾಗಿದೆ. ನಮ್ಮ ಸರ್ಕಾರವು ನಿರ್ಣಾಯಕ ನಾಯಕತ್ವವನ್ನು ಹೊಂದಿದೆ, ನಮ್ಮ ಪ್ರಾದೇಶಿಕ ಆಡಳಿತದ ಕಾರ್ಯವೈಖರಿ ಅನೇಕ ಜಿಲ್ಲೆಗಳಲ್ಲಿ, ವಿಶೇಷವಾಗಿ ಉಡುಪಿ ಜಿಲ್ಲೆಯಲ್ಲಿ, ಉತ್ತಮವಾಗಿವೆ, ನಮ್ಮ ಪ್ರಯೋಗಾಲಯಗಳು ಉತ್ತಮವಾಗಿ ತಯಾರಾಗಿವೆ, ನಮ್ಮ ಜನರು ಹೆಚ್ಚು ಜಾಗೃತರಾಗಿದ್ದಾರೆ ಮತ್ತು ಈ ತೊಂದರೆಯ ಸಮಯದಲ್ಲಿ ನಮ್ಮ ಇಡೀ ದೇಶವೇ ಒಟ್ಟಾಗಿ ನಿಂತಿದೆ. ಸರ್ಕಾರಿ ಕಾರ್ಯವೈಖರಿಯನ್ನು ನಾವು ಪರಿಪೂರ್ಣ ಎಂದು ಕರೆಯದಿದ್ದರೂ, ಈ ನಮ್ಮ ಸರ್ಕಾರಿ ಸಂಸ್ಥೆಗಳ ಪ್ರಸ್ತುತ ಮಟ್ಟದ ಧೃಢ ನಿಶ್ಚಯ, ಕೆಲಸದಲ್ಲಿ ತೊಡಗುವಿಕೆ, ಮತ್ತು ಸಂಪನ್ಮೂಲ ಕ್ರೋಢೀಕರಣವನ್ನು ಈ ಲೇಖಕ ಹಿಂದೆಂದೂ ನೋಡಿಲ್ಲ. ರೋಗಧಾರಕ ಮತ್ತು ರೋಗದ ಹಬ್ಬುವಿಕೆಯನ್ನು ತಗ್ಗಿಸುವ ಕ್ರಮಗಳನ್ನು ವಿವಿಧ ಆಡಳಿತ ಮತ್ತು ಪ್ರದೇಶಗಳ ಮಟ್ಟಗಳಲ್ಲಿ ಜಾರಿಗೆ ತರಲಾಗಿದೆ. ಈ ಸಾಂಕ್ರಾಮಿಕ ರೋಗಕ್ಕೆ ತಡೆ ಒಡ್ಡಲು ಸಾಮಾಜಿಕ (ದೈಹಿಕ) ಅಂತರ, ಸಂಪರ್ಕಕ್ಕೊಳಗಾದವರ ಪತ್ತೆಹಚ್ಚುವಿಕೆ ಮತ್ತು ಕೋವಿಡ್-19 ಡಯಾಗ್ನೋಸ್ಟಿಕ್ ಪರೀಕ್ಷೆಗಳನ್ನು ಯುದ್ಧದ ತಯಾರಿಯಂತೆ ಮಾಡಲಾಗುತ್ತಿದೆ. ಈ ಕಾರ್ಯಗಳ ಚಕ್ರಕ್ಕೆ ಕಡ್ಡಿ ತೂರಿಸುವಂತಹ ಕೆಲವು ಧಾರ್ಮಿಕ ಮತ್ತು ರಾಜಕೀಯ ಕೂಟಗಳ ಅಪವಾದಗಳ ನಡುವೆಯೂ ಇವು ನಮಗೆ ಫಲಪ್ರದವಾಗುವ ಹಾಗೆ ಕಾಣುತ್ತಿದೆ.

ಇಷ್ಟೆಲ್ಲಾ ಕ್ರಮಗಳನ್ನು ಕೈಗೊಂಡರೂ ಸಹಾ ಕೋವಿಡ್-19 ಸುಲಭವಾಗಿ ಕಣ್ಮರೆಯಾಗುವುದಿಲ್ಲ. ಮೇಲೆ ಹೇಳಿದ H1N1 ಇನ್ಫ್ಲೂಯೆನ್ಸಾ ಕಥೆಯಿಂದ ನಾವು ಕಂಡ ಹಾಗೆ, ನಾವು ಕೋವಿಡ್-19ಗೆ ಲಸಿಕೆಗಳನ್ನು ಮತ್ತು ಪರಿಣಾಮಕಾರಿ ಔಷಧಿಗಳನ್ನು ಅಭಿವೃದ್ಧಿಪಡಿಸಿದರೂ ಸಹಾ ಮುಂದಿನ ಕೆಲವು ವರ್ಷಗಳ ಕಾಲ, ಈ ಕೋವಿಡ್-19 ರೋಗವು ನಮ್ಮ ಜನರಿಗೆ ತೊಂದರೆಕೊಡಬಹುದು. ಈ ವೈರಸ್ H1N1 ಇನ್ಫ್ಲೂಯೆನ್ಸಾ ವೈರಸ್ಸಿನಂತೆ ಭಾರತಕ್ಕೆ “ಸ್ಥಳೀಯ” ವಾಗಬಹುದು ಮತ್ತು ಪ್ರತಿವರ್ಷ ಸಾವಿರಾರು ಜೀವಗಳಿಗೆ ಕಂಟಕವಾಗಬಹುದು.

ಸಮಯ ಮುಂದುವರೆದಂತೆ, ಶೀತ – ಜ್ವರ ಇರುವ ಹೆಚ್ಚು ಹೆಚ್ಚು ರೋಗಿಗಳನ್ನು ನಾವು ಖಂಡಿತವಾಗಿಯೂ H1N1, ಕೋವಿಡ್-19, ಅಥವಾ ಇನ್ನೊಂದು ವೈರಲ್ ಸೋಂಕೆಂದು ನಿಖರವಾಗಿ ಪತ್ತೆ ಮಾಡಬಹುದು. ನಿರ್ದಿಷ್ಟ ಡಯಾಗ್ನೋಸ್ಟಿಕ್ ಪರೀಕ್ಷೆಗಳನ್ನು ಬಳಸಿಕೊಂಡು ಈ ಮಾರಕ ಕಾಯಿಲೆಗಳನ್ನು ತ್ವರಿತವಾಗಿ ಸಾಬೀತುಪಡಿಸಿ ವೈದ್ಯರು ಇವನ್ನು ಸಾಮಾನ್ಯ “ವೈರಲ್ ಸೋಂಕು” ಎಂದು ತಳ್ಳಿಹಾಕದೇ, ಅಡೆನೊವೈರಸ್, ರೈನೋವೈರಸ್ ಸೇರಿದಂತೆ ಇದೇ ರೀತಿಯ ಕಾಯಿಲೆಗಳಿಗೆ ಕಾರಣವಾಗುವ ಹಲವಾರು ಅನೇಕ ವೈರಸ್‌ಗಳನ್ನು ಸ್ಪಷ್ಟವಾಗಿ ಗುರುತಿಸಲು ಪ್ರಾರಂಭಿಸಬಹುದು.

ನಾವೇನು ಮಾಡಬೇಕು? ನಮ್ಮ ಹೊಣೆಯೇನು?

ಕೋವಿಡ್-19 ರೋಗಕ್ಕೆ ಲಸಿಕೆ ಇದ್ದರೂ ಅಥವಾ ಇಲ್ಲದಿದ್ದರೂ, ಪರಿಣಾಮಕಾರಿ ಔಷಧಿ ಇದ್ದರೂ ಅಥವಾ ಇಲ್ಲದಿದ್ದರೂ, ನಾವು ಹಲವಾರು ರೀತಿಯ ವೈಯಕ್ತಿಕ ಹಾಗೂ ಸಾಮಾಜಿಕ ಶಿಸ್ತನ್ನು ಕಾಪಾಡಿಕೊಳ್ಳಲೇಬೇಕು. ನಾವು ನಮ್ಮ ಸಾಮಾಜಿಕ ನಡವಳಿಕೆ ಮತ್ತು ವೈಯಕ್ತಿಕ ನೈರ್ಮಲ್ಯವನ್ನು ಸುಧಾರಿಸಿಕೊಳ್ಳಲೇಬೇಕು. ಕೋವಿಡ್-19 ಮತ್ತು H1N1 ಎರಡನ್ನೂ ತಗ್ಗಿ – ಬಗ್ಗಿಸುವ ಮತ್ತು ನಿಲ್ಲಿಸುವ ನಿರ್ಣಾಯಕ ಕ್ರಮಗಳು ಒಂದೇ. ಇಡೀ ದೇಶದಲ್ಲಿ ನಾವು ಈಗ ಏನು ಮಾಡುತ್ತಿದ್ದೇವೆ? ದೈಹಿಕ ಅಂತರ, ವೈಯಕ್ತಿಕ ನೈರ್ಮಲ್ಯ, ಕೆಮ್ಮು ಬಂದಾಗ ಎಂಜಲು ಹರಡದಂತೆ ಮುಚ್ಚಿಕೊಳ್ಳುವ ಪ್ರಯತ್ನ, ಮುಖಕವಚದ ನೈರ್ಮಲ್ಯ, ಹೊರಗೆಲ್ಲೂ ಉಗುಳದೇ ಇರುವುದು ಇತ್ಯಾದಿ – ಇವು ಈ ಸೋಂಕುಗಳ ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ಈ ಶಿಸ್ತಿನ ಕ್ರಮಗಳು ಈ ಉಸಿರಾಟದ ಸೋಂಕುಗಳನ್ನು ಮಾತ್ರವಲ್ಲದೆ ಟೈಫಾಯಿಡ್, ಅಮೀಬಿಯಾಸಿಸ್, ಕಾಲರಾ, ವಾಂತಿ – ಭೇಧಿ ಮತ್ತು ಅನಾದಿಕಾಲದಿಂದ ನಮ್ಮನ್ನು ಕಾಡುತ್ತಿರುವ ಅನೇಕ ಕಾಯಿಲೆಗಳನ್ನು ಸಹಾ ಕಡಿಮೆ ಮಾಡುತ್ತದೆ. ಈ ವೈಯಕ್ತಿಕ ನೈರ್ಮಲ್ಯದ ಆಂದೋಲನವು ಸ್ವಚ್ಛ ಭಾರತ ಅಭಿಯಾನದ ಒಂದು ಪ್ರಮುಖ ಅಂಗವಾಗಬೇಕು.

1980 ರ ದಶಕದಲ್ಲಿ ಎಚ್ಐವಿ – ಏಡ್ಸ್ ಹೊರಹೊಮ್ಮುವಿಕೆಯು ಮನುಷ್ಯರ ಲೈಂಗಿಕ ನಡವಳಿಕೆಯನ್ನು ಗಮನಾರ್ಹವಾಗಿ ಬದಲಾಯಿಸಿದೆ. 2001 ರ ಸೆಪ್ಟೆಂಬರ್ 11 ರ ದಾಳಿಯು ನಮ್ಮ ಸುರಕ್ಷತೆಯ ವಿಧಾನಗಳನ್ನೇ ಶಾಶ್ವತವಾಗಿ ಬದಲಾಯಿಸಿದೆ, ವಿಶೇಷವಾಗಿ ವಿಮಾನ ನಿಲ್ದಾಣಗಳಲ್ಲಿ ಇದು ಸ್ಪಷ್ಟವಾಗಿ ಕಾಣುತ್ತದೆ. ಕೋವಿಡ್-19 ಅಂತಹದ್ದೇ ಒಂದು ಪ್ರಮುಖ ಘಟನೆ. ಇದರ ಪರಿಣಾಮವಾಗಿ ನಮ್ಮ ದೈನಂದಿನ ಜೀವನದ ಪ್ರತಿಯೊಂದು ಅಂಶಗಳಲ್ಲೂ ಸಾಮಾಜಿಕ ನಡವಳಿಕೆ ಮತ್ತು ವೈಯಕ್ತಿಕ ನೈರ್ಮಲ್ಯ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆ, ಭವಿಷ್ಯದಲ್ಲಿ ಅನಿವಾರ್ಯವಾಗಿ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗಗಳನ್ನು ಸೀಮಿತಗೊಳಿಸುವಲ್ಲಿ ನಮ್ಮ ಸಾಮಾಜಿಕ ಸಿದ್ಧತೆಗೆ ಇದು ಕಳೆದುಕೊಂಡಂತಹ ಅವಕಾಶವಾಗಿಬಿಡುತ್ತದೆ.

English version of this article: Change ahead. Are we ready?

1 Response

  1. N u Dmello says:

    Thanks Dr we fully believe you time & again your suggestions awareness & your guidenc was very helpful for us we are waiting for your advice please continue your valuable awareness. hanks Dr god bless you and your family 🙏.

Leave a Reply

Your email address will not be published. Required fields are marked *