ನೀವು ಅತಿಯಾಗಿ ನೀರು ಕುಡಿಯುತ್ತಿದ್ದೀರಾ?

“ನಾನು ತುಂಬಾ ನೀರು ಕುಡಿಯಲು ಪ್ರತಿದಿನ ಪ್ರಯತ್ನಿಸುತ್ತೇನೆ.”
“ನನ್ನ ಮೂತ್ರದ ಬಣ್ಣ ನೀರಿನಂತೆಯೇ ತಿಳಿಯಾಗಿರದಿದ್ದರೆ, ನಾನು ತುಂಬಾ ಕಡಿಮೆ ನೀರನ್ನು ಕುಡಿಯುತ್ತಿದ್ದೇನೆ ಎಂದು ಅರ್ಥ.”
“ಮೂತ್ರ ಮಾಡಲು ನಾನು ರಾತ್ರಿ ನಾಲ್ಕು ಬಾರಿ ಎದ್ದೇಳುತ್ತೇನೆ, ಆದರೆ ನಾನು ಮಲಗುವ ಮೊದಲು ನಾನು ಒಂದು ಲೀಟರ್ ನೀರನ್ನು ಕುಡಿಯಲೇಬೇಕಲ್ಲಾ.”
ಇವೆಲ್ಲವೂ ಸಹಾ ಆಸ್ಪತ್ರೆಯಲ್ಲಿ ಪ್ರತಿದಿನ ನಾನು ಕೇಳುವ ಸಾಮಾನ್ಯವಾದ ಮಾತುಗಳು. ಬಹಳಷ್ಟು ಜನರು ತಾವು ದಿನಾ ಅತಿ ಹೆಚ್ಚು ನೀರು ಕುಡಿಯಬೇಕು ಎಂಬ ಭ್ರಾಂತಿಯಲ್ಲಿರುತ್ತಾರೆ. ಕೆಲವೊಮ್ಮೆ, ಅಮ್ಮಂದಿರು ಅವರ 20 ಕ್ಕಿಂತ ಹೆಚ್ಚು-ವರ್ಷ-ವಯಸ್ಸಿನ ಮಕ್ಕಳ ಬಗ್ಗೆ ಈ ದೂರು ತರುತ್ತಾರೆ, “ಅವಳು ನೀರು ಕುಡಿಯುವುದೇ ಇಲ್ಲ!” ಕೆಲವರು ಹೀಗೂ ಸಹಾ ಹೇಳುತ್ತಾರೆ, “ನೀವು ಶೌಚಾಲಯದಲ್ಲಿ ಸಾಕಷ್ಟು ಸಮಯ ಕಳೆಯದಿದ್ದರೆ, ಆಸ್ಪತ್ರೆಯ ತುರ್ತು ಕೋಣೆಯಲ್ಲಿ ಸಮಯ ಕಳೆಯಬೇಕಾಗುತ್ತೆ!”
ಮುಂದೆ ಬರೆಯುವ ಮೊದಲು, ಒಂದು ಸ್ಪಷ್ಟೀಕರಣ – ನಾನು ಎಲ್ಲರಿಗೂ ಕಡಿಮೆ ನೀರನ್ನು ಕುಡಿಯಲು ಹೇಳುತ್ತಿದ್ದೇನೆ ಎಂದು ತಿಳಿಯಬೇಡಿ. ನಾನು ಹಾಗೆ ಖಂಡಿತಾ ಹೇಳುತ್ತಿಲ್ಲ.
ಪ್ರತಿ ದಿನ ನಾವು ಎಷ್ಟು ನೀರು ಕುಡಿಯಬೇಕು?
ಸಾಮಾನ್ಯವಾಗಿ ಎಲ್ಲರೂ ತಿಳಿದಿರುವುದು – ನೀವು ಹೆಚ್ಚು ನೀರು ಕುಡಿದಷ್ಟೂ ಅದು ನಿಮಗೆ ಒಳ್ಳೆಯದೆಂದು. ಆದರೆ ಈ ಹೇಳಿಕೆ ಎಲ್ಲರಿಗೂ ಅನ್ವಯಿಸುವುದಿಲ್ಲ!
ನಿಮ್ಮ ವಯಸ್ಸು, ಚಟುವಟಿಕೆಯ ಮಟ್ಟ ಹಾಗೂ ನಿಮಗಿರುವ ಯಾವುದೇ ವೈದ್ಯಕೀಯ ಪರಿಸ್ಥಿತಿಗಳ ಮೇಲೆ ನೀವು ಕುಡಿಯಲು ಎಷ್ಟು ನೀರು ತೆಗೆದುಕೊಳ್ಳ ಬಹುದು ಎಂಬುದು ಅವಲಂಬಿಸಿರುತ್ತದೆ. ಅದಲ್ಲದೇ ಗಂಡಸರಿಗೆ ಹಾಗೂ ಹೆಂಗಸರಿಗೆ ಸಹಾ ನೀರಿನ ಅವಶ್ಯಕತೆಯಲ್ಲಿ ವ್ಯತ್ಯಾಸ ಇದೆ. ನಮಗೆಲ್ಲರಿಗೂ ಸಾಧಾರಣ ನೀರಿನ ಸೇವನೆಯ ಅಗತ್ಯವಿದೆ. ಕೆಲವರಿಗೆ ಮಾತ್ರ ಹೆಚ್ಚಿನ ನೀರು ಸೇವನೆ ಬೇಕಾಗಬಹುದು.
ಆದರೆ, ಕೆಲವು ಜನರಿಗೆ, ಆರೋಗ್ಯಕರವಾಗಿ ಇರಲು ಕಡಿಮೆ ನೀರನ್ನು ಕುಡಿಯಬೇಕಾಗುತ್ತದೆ.
ಸಾಧಾರಣ ನೀರಿನ ಸೇವನೆ
ಹೆಚ್ಚಿನ ಆರೋಗ್ಯಕರ ಹಾಗೂ ಯೌವನದಲ್ಲಿರುವ ವ್ಯಕ್ತಿಗಳಿಗೆ ಸಾಧಾರಣ ನೀರಿನ ಸೇವನೆ ಸಾಕು. ಸಾಧಾರಣ ಎಂದರೆ ಎಷ್ಟು? ನಾವು ಬಾಯಾರಿದಾಗ ಮಾತ್ರ ನೀರು ಕುಡಿದರೆ ಅದು ಸಾಧಾರಣ ಸೇವನೆ.
ನಿಮ್ಮ ದಾಹವನ್ನು ತಗ್ಗಿಸುವಷ್ಟು ನೀರನ್ನು ಕುಡಿಯಬೇಕು; ಗ್ಯಾಲನ್ ಗಟ್ಟಲೆ ನೀರನ್ನು ಕುಡಿಯುವ ಅಗತ್ಯವಿರುವುದಿಲ್ಲ. ನೀವು ಯುವಕರಾಗಿದ್ದು ಹಾಗೂ ಆರೋಗ್ಯಕರವಾಗಿರುವವರೆಗೂ, ಹೆಚ್ಚು ಪ್ರಮಾಣದಲ್ಲಿ ನೀರನ್ನು ಕುಡಿದರೂ ನೀವು ಸರಿಯಾಗಿರಬಹುದು.
ಸಾಮಾನ್ಯವಾಗಿ, ಚಾಲ್ತಿಯಲ್ಲಿರುವ ಹವಾಮಾನ ಮತ್ತು ನಮ್ಮ ಚಟುವಟಿಕೆಯ ಮಟ್ಟಕ್ಕೆ ಅವಲಂಬಿಸಿ, ನಮ್ಮ ನೀರಿನ ಅವಶ್ಯಕತೆ ದಿನಕ್ಕೆ ಸುಮಾರು 2.5 ಲೀಟರ್ ಆಗಿರುತ್ತದೆ. ನಮ್ಮ ನೀರಿನ ಸೇವನೆಯು, ನಾವು ಕುಡಿಯುವ ನೀರಲ್ಲದೇ, ನಾವು ಸೇವಿಸುವ ವಿವಿಧ ಆಹಾರ ಮತ್ತು ಪಾನೀಯಗಳಲ್ಲಿನ ನೀರಿನ ಅಂಶವನ್ನೂ ಒಳಗೊಂಡಿರುತ್ತದೆ. ತಾಜಾ ಹಣ್ಣುಗಳು ಮತ್ತು ತರಕಾರಿಗಳು ಹೆಚ್ಚಿನ ನೀರಿನ ಅಂಶವನ್ನು ಹೊಂದಿವೆ ಎಂಬುದನ್ನು ಸಹಾ ನೆನಪಿಡಬೇಕು.
ಮೂತ್ರದ ಸಾಮಾನ್ಯ ಬಣ್ಣವು “ನೀರಿನಂತೆ” ಇರುವುದಿಲ್ಲ, ಆದರೆ ತಿಳಿ ಹಳದಿ ಬಣ್ಣ ಇರುತ್ತದೆ. ನಿಮ್ಮ ಮೂತ್ರದ ಬಣ್ಣವನ್ನು ನಿಯಂತ್ರಿಸಲು ನೀರು ಕುಡಿಯುವ ಬದಲು ಬಾಯಾರಿಕೆಯಾದಾಗ ನೀರನ್ನು ಕುಡಿಯಿರಿ.
ಅತಿ ಹೆಚ್ಚು ನೀರಿನ ಸೇವನೆ
ಮೂತ್ರಪಿಂಡದ ಕಲ್ಲುಗಳು ಇರುವ ಜನರು ಬೇರೆಯವರಿಗಿಂತ ಸ್ವಲ್ಪ ಹೆಚ್ಚಿನ ಪ್ರಮಾಣದ ನೀರನ್ನು ಕುಡಿಯುವ ಅವಶ್ಯಕತೆ ಇರುತ್ತದೆ. ಮೂತ್ರಪಿಂಡದಲ್ಲಿ ಕಲ್ಲಾಗುವುದನ್ನು ತಪ್ಪಿಸಲು ಹೆಚ್ಚಿನ ಜನರಿಗೆ ದಿನಕ್ಕೆ 2.5 ಲೀಟರ್ ಮೂತ್ರವನ್ನು ಉತ್ಪತ್ತಿ ಮಾಡಬೇಕಾಗುತ್ತದೆ ಎಂದು ಸಂಶೋಧನೆಗಳು ತೋರಿಸಿವೆ. ಹವಾಮಾನ ಮತ್ತು ದೈಹಿಕ ಚಟುವಟಿಕೆಯ ಮಟ್ಟವನ್ನು ಅವಲಂಬಿಸಿ, 2.5 ಲೀಟರ್ ಮೂತ್ರವನ್ನು ಉತ್ಪತ್ತಿ ಮಾಡಲು 3.0 ರಿಂದ 3.5 ಲೀಟರ್ ಪ್ರಮಾಣದ ನೀರು ಕುಡಿಯಬೇಕಾಗುತ್ತದೆ.
ಮಲಬದ್ಧತೆ ಇರುವವರು ನಿರ್ಜಲೀಕರಣವನ್ನು ತಪ್ಪಿಸಲು ಸ್ವಲ್ಪ ಹೆಚ್ಚಿನ ನೀರು ಸೇವಿಸುವ ಅಗತ್ಯವಿರಬಹುದು. ಇಂತಹವರಿಗೆ ಹೆಚ್ಚಿನ ನೀರಿನ ಸೇವನೆಗಿಂತಲೂ ಆಹಾರದಲ್ಲಿ ಹೆಚ್ಚಿನ ನಾರಿನ ಅಂಶದ ಸೇವನೆಯು ಮುಖ್ಯವಾಗಿರುತ್ತದೆ.
ನೀರಿನ ನಿರ್ಬಂಧ – ಯಾರು ನೀರು ಕುಡಿಯುವುದನ್ನು ಕಡಿಮೆ ಮಾಡಬೇಕು?
ಕಳೆದ ಸುಮಾರು ಎರಡು ದಶಕಗಳ ನನ್ನ ವೈದ್ಯಕೀಯ ಅನುಭವದಲ್ಲಿ, ಅತಿ ಹೆಚ್ಚು ನೀರಿನ ಸೇವನೆಯಿಂದ ಉಂಟಾಗುವ ರೋಗಲಕ್ಷಣಗಳೊಂದಿಗೆ ಬರುವ ಹಲವಾರು ರೋಗಿಗಳನ್ನು ನಾನು ನೋಡಿದ್ದೇನೆ. ಹಲವಾರು ಬಾರಿ ಅವರ ನೆರೆಹೊರೆಯವರು ಅಥವಾ ಸ್ನೇಹಿತರು ಅವರಿಗೆ ಬಹಳ ನೀರು ಕುಡಿಯಲು ಹೇಳಿರುತ್ತಾರೆ. ಕೆಲವರಿಗೆ ಅತಿ ಗಂಭೀರ ರೋಗಲಕ್ಷಣಗಳು ಕಾಣಿಸಿಕೊಳ್ಳುವುದರಿಂದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಇನ್ನೂ ಕೆಲವರಿಗೆ ತೀವ್ರ ಆರೈಕೆ ಘಟಕಗಳಲ್ಲಿ ಚಿಕಿತ್ಸೆಯ ಅಗತ್ಯವೂ ಬರುತ್ತದೆ.
ಕನ್ನಡದಲ್ಲಿ ಒಂದು ಜನಪ್ರಿಯ ಗಾದೆ ಇದೆ – “ಅತಿಯಾದರೆ ಅಮೃತ ಸಹಾ ವಿಷವಾಗುತ್ತದೆ.” ಅತಿಯಾಸೆ ಗತಿಕೇಡು, ಹಾಗೇ ಅತಿನೀರೂ ಗತಿಕೇಡೇ!
ಅತಿ ಹೆಚ್ಚು ನೀರು ಕುಡಿಯುವುದರಿಂದಾಗುವ ಪ್ರಮುಖ ಕೆಟ್ಟ ಪರಿಣಾಮಗಳು ಯಾವುವು?
- ಹೃದಯದ ಮೇಲೆ ಹೆಚ್ಚು ಹೊರೆ
- ಮೂತ್ರಪಿಂಡಗಳ ಮೇಲೆ ಹೆಚ್ಚು ಹೊರೆ
- ರಕ್ತದಲ್ಲಿ ಉಪ್ಪಿನ ಸಾರ ತೆಳುವಾಗಿ, ಹೈಪೊನಾಟ್ರೀಮಿಯಾ (ರಕ್ತದಲ್ಲಿ ಸೋಡಿಯಂ ಮಟ್ಟ ಕಡಿಮೆಯಾಗುವುದು)
- ಮಿದುಳಿನ ಜೀವಕೋಶಗಳ ಊತ (ಹೈಪೋನಾಟ್ರೀಮಿಯಾದಿಂದಾಗಿ
ಸೀಮಿತ ಕಡಿಮೆ ನೀರಿನ ಸೇವನೆಯ ಅಗತ್ಯವಿರುವವರು ಯಾರು?
- ಹೃದಯ ರೋಗ, ಮೂತ್ರಪಿಂಡದ ಕಾಯಿಲೆಗಳು ಮತ್ತು ಇತರ ಅಸ್ವಸ್ಥತೆಗಳಿರುವಂತಹ ಜನರು ತಮಗೆ ಒಂದು ದಿನದಲ್ಲಿ ಗರಿಷ್ಠ ನೀರು (ಹಾಗೂ ಉಪ್ಪು) ಸೇವನೆಯ ಬಗ್ಗೆ ತಮ್ಮ ವೈದ್ಯರಲ್ಲಿ ಮಾತನಾಡಿ ತಿಳಿಯಬೇಕು. ಇಂತಹವರು ಹೆಚ್ಚುವರಿ ನೀರನ್ನು ಸೇವಿಸುವುದರಿಂದ ಆರಂಭದಲ್ಲಿ ಪಾದಗಳ ಊತ ಉಂಟಾಗುತ್ತದೆ, ಆದರೆ ಇನ್ನೂ ಹೆಚ್ಚಾದರೆ, ಪಲ್ಮನರಿ ಎಡಿಮಾ (ಶ್ವಾಸಕೋಶದ ಊತ – ಅಂದರೆ ಶ್ವಾಸಕೋಶದಲ್ಲಿ ನೀರಿನ ಪ್ರವಾಹ/ ಅತಿವೃಷ್ಟಿ) ಎಂಬ ಜೀವಕ್ಕೆ ಅಪಾಯ ಬರುವಂತಹ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಪಲ್ಮನರಿ ಎಡಿಮಾ ತೀವ್ರತರವಾದ ಉಸಿರಾಟದ ಯಾತನೆಯನ್ನು ಉಂಟುಮಾಡುತ್ತದೆ ಮತ್ತು ತುರ್ತಾಗಿ ಆಸ್ಪತ್ರೆಗೆ ಸೇರುವ ಅಗತ್ಯವನ್ನೂ ಉಂಟು ಮಾಡಬಹುದು.
- ಹೈಪೊನಾಟ್ರೀಮಿಯಾ ಇರುವವರು (ಹಾಗೂ ಹೈಪೋನಾಟ್ರೀಮಿಯಾದಿಂದ ಈಚೆಗಷ್ಟೇ ಚೇತರಿಸಿಕೊಂಡವರು) ಸೇವಿಸುವ ನೀರಿನ ಪ್ರಮಾಣವನ್ನು ಸೀಮಿತವಾಗಿ ಇಡಬೇಕು. ಈ ಪರಿಸ್ಥಿತಿಯಲ್ಲಿ ಹೆಚ್ಚು ನೀರನ್ನು ಕುಡಿಯುವುದರಿಂದ ರಕ್ತದ ಸಾಂದ್ರತೆ ಕಡಿಮೆಯಾಗಿ, ಸೋಡಿಯಂ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಹೈಪೋನಾಟ್ರೀಮಿಯಾವು ಮಿದುಳಿನ ಕೋಶಗಳಲ್ಲಿ ಊತ ಉಂಟುಮಾಡಿ, ಅರೆಪ್ರಜ್ಞಾವಸ್ಥೆ, ಮನಸ್ಸಿನ ಗೊಂದಲ, ಮೂರ್ಛೆರೋಗ ಮತ್ತು ಕೋಮಾ ಉಂಟಾಗಲು ಕಾರಣವಾಗಬಹುದು. ಹೈಪೋನಾಟ್ರೀಮಿಯಾ ಜೀವಕ್ಕೆ ಅಪಾಯಕಾರಿ ಸ್ಥಿತಿಯಾಗಿರುತ್ತದೆ.
- ನೋವು ನಿವಾರಕ, ರಕ್ತದೊತ್ತಡವನ್ನು ನಿಯಂತ್ರಿಸಲು ಉಪಯೋಗಿಸುವ ಕೆಲವು ಔಷಧಿಗಳು, ಹಾಗೂ ಸ್ಟೆರಾಯ್ಡ್ ಮುಂತಾದ ಕೆಲವು ಔಷಧಿಗಳನ್ನು ತೆಗೆದುಕೊಳ್ಳುತ್ತಿರುವ ಜನರು ತಾವು ಸೇವಿಸುವ ನೀರಿನ (ಮತ್ತು ಉಪ್ಪಿನ) ಪ್ರಮಾಣಕ್ಕೆ ಸಂಬಂಧಿಸಿದಂತೆ ಅವರ ವೈದ್ಯರನ್ನು ಭೇಟಿಯಾಗಿ ಚರ್ಚಿಸಬೇಕು. ನೀವು ಅತಿಯಾದ ನೀರು ಮತ್ತು ಉಪ್ಪು ಸೇವನೆಯನ್ನು ಬಿಡಬೇಕಾಗಬಹುದು.
ಕೆಲವು ಜನರು ಅತಿ ಹೆಚ್ಚು ನೀರು ಕುಡಿಯಲು ಯಾವಾಗಲೂ ಹಾತೊರೆಯುತ್ತಾರೆ – ನಾವು ಇದನ್ನು ಸೈಕೋಜೆನಿಕ್ ಪಾಲಿಡಿಪ್ಸಿಯಾ (ಅತಿ ನೀರು ಬೇಕೆನ್ನಿಸುವ ಒಂದು ಮಾನಸಿಕ ರೋಗ) ಎಂದು ಕರೆಯುತ್ತೇವೆ. ಇದರ ಒಂದು ಲಕ್ಷಣ ಹೈಪೋನಾಟ್ರೀಮಿಯಾ – ಇದನ್ನು ಮೇಲೆ ವಿವರಿಸಲಾಗಿದೆ.
ಕಡೆ ಮಾತು:
ನೀರು ನಿಮಗೆ ಒಳ್ಳೆಯದು, ಆದರೆ ನೀವು ಅದನ್ನು ಅತಿಯಾಗಿ ಕುಡಿಯದೇ ಇರುವವರೆಗೆ. ನೆನಪಿಡಿ – ಅತಿನೀರು ಕುಡಿಯುವುದು ಒಳ್ಳೆಯದಲ್ಲ. ಬಾಯಾರಿಕೆಯಾದಾಗ ನೀರು ಕುಡಿಯುವುದು ಉತ್ತಮ. ನಿಮ್ಮ ದೇಹದ ಬೇಡಿಕೆಯಂತೆ ನೀರಿನ ಸೇವನೆ ಮಾಡಿದರೆ ನೀವು ಬಹುಶಃ ಸುರಕ್ಷಿತವಾಗಿರುತ್ತೀರಿ.
ನಿಮ್ಮ ದೇಹದಲ್ಲಿ ಈ ಸ್ಥಿತಿಯಾಗುವುದನ್ನು ನೀವು ಖಂಡಿತವಾಗಿಯೂ ಬಯಸುವುದಿಲ್ಲ ಅಲ್ಲವೇ:
- ಶಶಿಕಿರಣ ಉಮಾಕಾಂತ್

Dr Shashikiran Umakanth (MBBS, MD, FRCP Edin.) is Professor & Head of Internal Medicine at MMMC, Manipal Academy of Higher Education, and has clinical responsibilities at the Department of Medicine, Dr TMA Pai Hospital, Udupi, Karnataka, India.
Thank you sir e salahe yannu kottiddakke naanu neeru tumba kudiyutidde neevu nanage buddi helida hagaytu
Thank u sir once again so much
Neeru aarogyakke estu olleyado hage hechu neeru kudiyuvudrind ashte kettaddu anta nimmind tilidukonde sir